Song of Solomon 1

ಭಾಗ ಒಂದು

ದ್ರಾಕ್ಷಾರಸಕ್ಕಿಂತಲೂ ಶ್ರೇಷ್ಠವಾದ ಪ್ರೀತಿ


1ಸೊಲೊಮೋನನು ರಚಿಸಿದ ಪರಮಗೀತೆ.

2 ಚುಂಬಿಸೆನ್ನನು ನಿನ್ನ ತುಟಿಗಳಿಂದ,
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.
3 ನಿನ್ನ ತೈಲವು ಸುಗಂಧ;
ನಿನ್ನ ಹೆಸರು ಸುರಿದ ತೈಲದ ಸುಗಂಧದಂತೆ ವ್ಯಾಪಿಸಿರುವುದರಿಂದ,
ತರುಣಿಯರು ನಿನ್ನನ್ನು ಪ್ರೀತಿಸುವರು.
4 ನನ್ನನ್ನು ನಿನ್ನಡೆಗೆ ಸೆಳೆದುಕೋ; ನಿನ್ನ ಹಿಂದೆ ಓಡಿ ಬರುವೆನು;
ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ;
ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು,
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮವಾದುದು;
ಸ್ತ್ರೀಯರು ನಿನ್ನನ್ನು ಯಥಾರ್ಥವಾಗಿ ಪ್ರೀತಿಸುವರು.

5

ಯೆರೂಸಲೇಮಿನ ಮಹಿಳೆಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ,

ಸೊಲೊಮೋನನ ಪರದೆಗಳಂತೆ ಚೆಲುವಾಗಿದ್ದೇನೆ.
6 ನಾನು ಕಪ್ಪಾಗಿದ್ದೇನೆ ಎಂದು ನನ್ನನ್ನು ದಿಟ್ಟಿಸಿ ನೋಡಬೇಡಿರಿ.
ನಾನು ಕಪ್ಪಾಗಿರುವುದು ಸೂರ್ಯನ ತಾಪದಿಂದ.
ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು
ದ್ರಾಕ್ಷಿ ತೋಟಗಳನ್ನು ಕಾಯುವುದಕ್ಕೆ ಇಟ್ಟರು;
ಆದರೆ ನನ್ನ ಸ್ವಂತ ದ್ರಾಕ್ಷೇ ತೋಟವನ್ನೂ ನಾನು ಕಾಯ್ದುಕೊಳ್ಳಲಾಗಲಿಲ್ಲ.

7

ನನ್ನ ಪ್ರಾಣಪ್ರಿಯನೇ,

ನಿನ್ನ ಮಂದೆಯನ್ನು ಎಲ್ಲಿ ಮೇಯಿಸುವೆ?
ನಡುಹಗಲಲ್ಲಿ ನಿನ್ನ ಮಂದೆಯು ಎಲ್ಲಿ ವಿಶ್ರಮಿಸುತ್ತದೆ? ಹೇಳು.
ನಾನೇಕೆ ಮುಸುಕು ಹಾಕಿದವಳಂತೆ
ನಿನ್ನ ಗೆಳೆಯರ ಮಂದೆಗಳ ಹತ್ತಿರ ಅಲೆಯಬೇಕು?


8

ಸ್ರ್ತೀಯರಲ್ಲಿ ಅತೀ ಸುಂದರವಾದ ಹೆಣ್ಣು ನೀನು,

ನಿನಗಿದು ಗೊತ್ತಿಲ್ಲವಾದರೆ
ಹಿಂಡಿನ ಹೆಜ್ಜೆಯ ಜಾಡನ್ನು ಹಿಡಿದು ಹೋಗಿ,
ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.


9

ಪ್ರಿಯಳೇ, ನಿನ್ನನ್ನು ಫರೋಹನ ರಥವನ್ನೆಳೆವ ಹೆಣ್ಣು ಕುದುರೆಗೆ ಹೋಲಿಸಿದ್ದೇನೆ.

10 ನಿನ್ನ ಕೆನ್ನೆಗಳು ಆಭರಣಗಳಿಂದಲೂ,
ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ!
11 ನಾನು ನಿನಗಾಗಿ ಬಂಗಾರದ ಅಂಚಿನಿಂದ ಕೂಡಿರುವ,
ಬೆಳ್ಳಿಯ ಕುಚ್ಚಗಳನ್ನು ಮಾಡಿಸುವೆನು.

12

ರಾಜನು ಅತ್ತ ಓಲಗದಲ್ಲಿದ್ದಾಗ

ಇತ್ತ ನನ್ನ ಸುಗಂಧತೈಲವು ಪರಿಮಳವನ್ನು ಬೀರುತ್ತಿತ್ತು.
13 ಎನ್ನಿನಿಯನು [ಪ್ರಿಯನು] ನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ;
14 ನನ್ನ ಪಾಲಿಗೆ ನನ್ನ ನಲ್ಲನು ಏನ್ಗೆದಿಯ ದ್ರಾಕ್ಷೇ ತೋಟಗಳ
ಗೋರಂಟೆಯ ಹೂಗೊಂಚಲು.


15

ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ!,

ಆಹಾ, ನೀನು ಎಷ್ಟು ಸುಂದರಿ!
ನಿನ್ನ ನೇತ್ರಗಳು ಪಾರಿವಾಳಗಳಂತಿವೆ.


16

ಆಹಾ, ಎನ್ನಿನಿಯನೇ, ನೀನೆಷ್ಟು ಸುಂದರ, ನೀನೆಷ್ಟು ಮನೋಹರ!

ಹಚ್ಚ ಹಸಿರು ಚಿಗುರುಗಳು ನಮ್ಮ ಮಂಚ,
17 ನಮ್ಮ ಮನೆಯ ಛಾವಣಿ ತುರಾಯಿ ಮರಗಳೇ,
ತೊಲೆಗಳು ದೇವದಾರು ವೃಕ್ಷಗಳೇ.

Copyright information for KanULB